ದೆಹಲಿ ಕರ್ನಾಟಕ ಸಂಘದ ಗ್ರಂಥಾಲಯ

 
  ದೆಹಲಿ ಕರ್ನಾಟಕ ಸಂಘಕ್ಕೆ ಒಂದು ಶ್ರೀಮಂತವಾದ ಇತಿಹಾಸವಿರುವಂತೆ ಸಂಘದ ಗ್ರಂಥಾಲಯಕ್ಕೂ ಒಂದು ಹಿನ್ನೆಲೆಯಿದೆ. ೧೯೯೦ ರ ದಶಕದವರೆಗೂ ಗ್ರಂಥಾಲಯವೆಂಬ ಪರಿಕಲ್ಪನೆಯೇ ಇದ್ದಿಲ್ಲ. ತಾಯ್ನಾಡಿನಿಂದ ದೂರವಿರುವ ಕನ್ನಡಿಗರಿಗೊಂದು ಗ್ರಂಥಾಲಯವಿರಬೇಕೆಂದು ಮನಗಂಡು ಅಂದಿನ ಸಹೃದಯ ಸಾಹಿತ್ಯಾಸಕ್ತ ಕನ್ನಡಿಗರು ಗ್ರಂಥಾಲಯವನ್ನು ಹುಟ್ಟುಹಾಕಿದರು. ೧೯೯೨ ರಲ್ಲಿ ಶ್ರಿಯುತ ಸರವೂ ಕೃಷ್ಣ ಭಟ್ ಅವರು ಕಾರ್ಯದರ್ಶಿಯಾಗಿ ಆಡಳಿತ ವಹಿಸಿಕೊಂಡ ನಂತರ ದೆಹಲಿಗನ್ನಡಿಗ ಸಾಹಿತ್ಯಾಸಕ್ತರ ಚಿಂತನೆಯಿಂದ ಗ್ರಂಥಾಲಯಯ ರೂಪುಗೊಳ್ಳತೊಡಗಿತು. ೧೯೯೫-೯೬ ರಲ್ಲಿ ದೆಹಲಿವಾಸಿಯಾಗಿದ್ದ ಸಾಹಿತಿ ಬೊಳುವಾರ್ ಮೊಹಮ್ಮದ ಕುಂಇ ಅವರೇ ಸ್ವತಃ ಬೆಂಗಳೂರಿನಿಂದ ಒಂದು ಲಕ್ಷ ರೂಪಾಯಿಯ ಪುಸ್ತಕಗಳನ್ನು ಗ್ರಂಥಾಲಯಕ್ಕಾಗಿ ಖರೀದಿಸಿ ತಂದರಂತೆ. ಪುಸ್ತಕ ಪ್ರಾಧಿಕಾರವೂ ಉದಾರವಾಗಿ ಅನುದಾನ ನೀಡಿದೆ. ಸಿ.ವಿ. ಗೋಪಿನಾಥ ಅವರು ಗ್ರಂಥಾಲಯಕ್ಕೆ ಬೇಕಾದ ಕಪಾಟು, ಮೇಜು ಕುರ್ಚಿ ಇತ್ಯಾದಿಗಳ ವ್ಯವಸ್ಥೆ ಮಾಡಿದರು. ಅನೇಕ ಲೇಖಕರು ತಮ್ಮ ತಮ್ಮ ಕೃತಿಗಳನ್ನು ಸಂಘಕ್ಕೆ ಕಳಿಸಿಕೊಡುತ್ತಿದ್ದು ಪುಸ್ತಕಗಳ ರಾಶಿಯೇ ಸಂಗ್ರಹವಾಗಿತ್ತು. ಅವುಗಳನ್ನೆಲ್ಲ ಸುವ್ಯವಸ್ಥಿತವಾಗಿಡುವ ಕೆಲಸ ಅತ್ಯಗತ್ಯವಾಗಿತ್ತು. ೧೯೯೭ ರಲ್ಲಿ ಸಂಘದ ವ್ಯವಸ್ಥಾಪಕರಾಗಿದ್ದ ಟಿ.ಎಸ್.ಶಿವಶಂಕರ್, ರಮಾ ಹೆಗಡೆ, ಬಸವರಾಜ ಮೇಟಿ ಮೊದಲಾದವರು ಸೇರಿ ಪುಸ್ತಕಗಳನ್ನು ಬೇರೆ ಬೇರೆಯಾಗಿ ವಿಂಗಡಿಸಿ, ಸಂಘದ ಮುದ್ರೆಯೊತ್ತಿ, ನಂಬರ್ ಹಾಕಿ ವ್ಯವಸ್ಥಿತವಾಗಿಡುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಪೂರೈಸಿದ್ದರು. ಹೀಗೆ ಹುಟ್ಟಿಕೊಂಡ ಗ್ರಂಥಾಲಯ ಮುಂದೆ ಸಂಘದ ಹಿರಿಯ ಸದಸ್ಯರೂ ನಮ್ಮೆಲ್ಲರ ಮಾರ್ಗದರ್ಶಕರೂ ಆಗಿರುವ ಶ್ರೀ ಎಂ. ಎಸ್. ಸಾಂತೂರು ಅವರ ಸತತ ಪ್ರಯತ್ನ ಮತ್ತು ಪರಿಶ್ರಮದಿಂದ ಪರಿಪೂರ್ಣಗೊಂಡಿತು. ಅವರು ಸಂಘದ ಗ್ರಂಥಾಲಯಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸದೆ ಇರಲಾಗುವುದಿಲ್ಲ. ಸಂಘದ ಗ್ರಂಥಾಲಯಕ್ಕೆ ಭೇಟಿ ನೀಡಿದ ಎಲ್ಲರೂ ಸಾಂತೂರು ಅವರು ಸಂಘದ ಗ್ರಂಥಾಲಯಕ್ಕೆ ನೀಡಿದ ಸೇವೆಯ ಪರಿಣಾಮವಾಗಿ ಇಂದು ಸಂಘದ ಗ್ರಂಥಾಲಯದಲ್ಲಿ ಸುಮಾರು ೪೦ ಸಾವಿರಕ್ಕೂ ಹೆಚ್ಚು ಪುಸ್ತಕಗಳು ಇರುವಂತಾಗಿದೆ.

ಸಂಘದ ಗ್ರಂಥಾಲಯವನ್ನು ಬಹುತೇಕವಾಗಿ ದಾನಿಗಳ ಸಹಾಯದಿಂದ ಬೆಳೆಸಲಾಗಿದೆ. ಸಂಘಕ್ಕೆ ಭೇಟಿ ನೀಡಿದ ಲೇಖಕರೆಲ್ಲರೂ ತಮ್ಮ ಪ್ರಕಟಣೆಗಳನ್ನು ಉದಾರವಾಗಿ ಸಂಘಕ್ಕೆ ನೀಡಿದರೆ, ಕೆಲವು ಮಹನೀಯರು ತಮ್ಮ ವೈಯಕ್ತಿಕ ಪುಸ್ತಕ ಸಂಗ್ರಹವನ್ನು (ಅಂಥ ಮುಖ್ಯ ಮಹನೀಯರ ಪಟ್ಟಿಯನ್ನು ಪ್ರತ್ಯೇಕವಾಗಿ ನೀಡಲಾಗಿದೆ) ಸಂಘಕ್ಕೆ ನೀಡಿದ್ದಾರೆ. ಹೀಗೆ ದಾನಿಗಳ ಮೂಲಕವೇ ಸಂಘದ ಗ್ರಂಥಾಲಯ ಬೆಳೆದದ್ದರಿಂದ ಗ್ರಂಥಾಲಯಕ್ಕೆ ಒಂದು ತಾತ್ವಿಕ ಚೌಕಟ್ಟು ಇಲ್ಲವಾಗಿದೆ. ರಾಜಧಾನಿಯಲ್ಲಿ ಇರುವ ಕನ್ನಡ ಗ್ರಂಥಾಲಯವು ಇತರ ಗ್ರಂಥಾಲಯಗಳಿಗಿಂತ ಹೇಗೆ ಭಿನ್ನವಾಗಿರಬಹುದು? ಎಂದು ಯೋಚಿಸಿದಾಗ ನಮಗೆ ಹಲವು ಬಗೆಯ ಒಳನೋಟಗಳು ದೊರೆಯುತ್ತವೆ. ಮುಖ್ಯವಾಗಿ ಕನ್ನಡದಿಂದ ಬೇರೆ ಭಾಷೆಗಳಿಗೆ ಅನುವಾದಗೊಂಡ ಪುಸ್ತಕಗಳೆಲ್ಲವು ಇಲ್ಲಿರಬೇಕು. ಹಾಗೆಯೇ ಬೇರೆ ಭಾಷೆಯಿಂದ ಕನ್ನಡಕ್ಕೆ ಬಂದ ಪುಸ್ತಕಗಳೂ ಇಲ್ಲಿರಬೇಕು. ಜೊತೆಗೆ ದೆಹಲಿಯ ವಿವಿಧ ವಿಶ್ವವಿದ್ಯಾಲಯಗಳು ಹಾಗೂ ಇತರ ಪ್ರಮುಖ ಶಿಕ್ಷಣ ಸಂಸ್ಥೆಗಳಿಂದ ಆಗಮಿಸುವ ವಿದ್ವಾಂಸರಿಗೆ ಕನ್ನಡದ ಕೃತಿಗಳು ದೊರೆಯುವಂತಿರಬೇಕು. ಕನ್ನಡ ಭಾಷಾ ಸಾಹಿತ್ಯವನ್ನು ಭಾರತದ ಇತರ ಭಾಷೆಗಳೊಂದಿಗೆ ಹೋಲಿಸಿ ಮೌಲ್ಯಮಾಪನ ಮಾಡಲ ಅನುಕೂಲವಾಗುವಂತಹ ವಾತಾವರಣ ಮತ್ತು ಗ್ರಂಥಾಲಯದಲ್ಲಿ ಅತ್ಯಮೂಲ್ಯ ಪುಸ್ತಕಗಳಿವೆ. ಪಂಪಭಾರತ, ಗದಾಯುದ್ಧ, ಕರ್ನಾಟಕ ಭಾರತ ಕಥಾಮಂಜರಿ, ಶೂನ್ಯ ಸಂಪಾದನೆ, ದಾಸರ ಪದಗಳಂತಹ ಹಳಗನ್ನಡ-ನಡುಗನ್ನಡ ಪಠ್ಯಗಳಿವೆ. ಆಧುನಿಕ ಕನ್ನಡ ಸಾಹಿತ್ಯದ ವಿವಿಧ ಪ್ರಾಕಾರಗಳಿವೆ. ಆಧುನಿಕ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಾದ ಕಾದಂಬರಿ, ಕವಿತೆ, ನಾಟಕ, ಪ್ರಬಂಧ, ವಿಮರ್ಶೆ, ಜೀವನ ಚರಿತ್ರೆ, ಅಭಿನಂದನ ಗ್ರಂಥ ಸಂಪುಟಗಳು, ಸಮಗ್ರ ಕೃತಿಗಳು, ವಿಶ್ವಕೋಶಗಳೆಲ್ಲಾ ಗ್ರಂಥ ಭಂಡಾರದಲ್ಲಿವೆ. ಭಾರತೀಯ ಕಲೆ ಮತ್ತು ವಾಸ್ತುಶಿಲ್ಪಕ್ಕೆ ಸಂಬಂಧಿಸಿದ ವಿಜ್ಞಾನ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ, ಕನ್ನಡ ಜಾನಪದದ ಮತ್ತು ಮಕ್ಕಳ ಸಾಹಿತ್ಯದ ಬಗೆಗೂ ಕೃತಿಗಳಿವೆ. ಭಾಷಾ ಕಲಿಕೆಗೆ ಸಂಬಂಧಿಸಿದ ಉಪಯುಕ್ತ ಕೃತಿಗಳೂ ಇವೆ. ಡಿಎಲ್ ನರಸಿಂಹಾಚಾರ್, ಬಿ.ಎಂ.ಶ್ರೀ, ತೀ.ನಂ.ಶ್ರೀ, ಕಾರಂತ, ಬೇಂದ್ರೆ, ಮಾಸ್ತಿ, ಅನಂತಮೂರ್ತಿ, ಕಾರ್ನಾಡ ಮೊದಲಾದವರ ಅಮೂಲ್ಯ ರಚನೆಗಳೆಲ್ಲ ಗ್ರಂಥಾಲಯದಲ್ಲಿದೆ. ಆದರೆ ಪುಸ್ತಕಗಳನ್ನು ವೈಜ್ಞಾನಿಕವಾಗಿ ಪೂರ್ತಿಯಾಗಿ ವಿಂಗಡಿಸಿಲ್ಲ. ಈಗ ಹೊಸ ಜಾಗವೊಂದರಲ್ಲಿ ಪುಸ್ತಕಗಳನ್ನು ವೈಜ್ಞಾನಿಕವಾಗಿ ಜೋಡಿಸುವ, ಸಂರಕ್ಷಿಸುವ, ಓದುಗರಿಗೆ ಒದಗಿಸಿ ಕೊಡುವ ಕೆಲಸವನ್ನು ಇನ್ನಷ್ಟೇ ಮಾಡಬೇಕಾಗಿದೆ. ಸುದೈವಕ್ಕೆ ಕಳೆದ ೨೦೦೮ ರ ಫೆಬ್ರವರಿ ತಿಂಗಳಲ್ಲಿ ಬೆಂಗಳೂರಿನ ಇನ್‌ಫೋಸಿಸ್ ಫೌಂಡೇಶನ್‌ನ ವತಿಯಿಂದ ಶ್ರೀಮತಿ ಸುಧಾ ಮೂರ್ತಿಯವರು ಸಂಘದ ಗ್ರಂಥಾಲಯಕ್ಕೆ ೧೦ ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಇನ್‌ಫೋಸಿಸ್ ಫೌಂಡೇಶನ್ ಗ್ರಂಥಾಲಯ ಸಂಘದ ತಳಮನೆಯಲ್ಲಿ ಆಧುನಿಕ ರೀತಿಯಲ್ಲಿ ಕಾರ್ಯಾರಂಭ ಮಾಡಬೇಕಾಗಿದೆ. ದೆಹಲಿ ಕನ್ನಡಿಗರಿಗೆ ಸುಸಜ್ಜಿತ ಗ್ರಂಥಾಲಯ ದೊರೆಯಲಿದೆ.

ದೆಹಲಿ ಕರ್ನಾಟಕ ಸಂಘದಗೃಂಥಾಲಯವನ್ನುಅತ್ಯಾಧುನಿಕವಾಗಿಕಟ್ಟಬೇಕೆಂಬ ಕನಸಿನಲ್ಲಿ ನಾವೆಲ್ಲ ಕೆಸ ಮಾಡುತ್ತಿದ್ದೇವೆ. ಅಲ್ಲಿಕನ್ನಡದಿಂದ ಬೇರೆ ಭಾಷೆಗಳಿಗೆ ಹೋದ ಎಲ್ಲ ಪುಸ್ತಕಗಳು ದೊರೆಯುವ ಹಾಗೆ, ಬೇರೆ ಭಾಷೆಗಳಿಂದ ಕನ್ನಡಕ್ಕೆ ಅನುವಾದಗೊಂಡ ಎಲ್ಲ ಕೃತಿಗಳೂ ದೊರೆಯಬೇಕು. ಈ ಅರ್ಥದಲ್ಲಿಕನ್ನಡವು ಇತರ ಭಾಷೆಗಳೊಡನೆ ನಡೆಸಿದ ಸಂವಾದಗಳಿಗೆ ಸಂಘ ಸಾಕ್ಷಿಯಾಗಬೇಕು. ಅದೇ ರೀತಿಯಲ್ಲಿ ಗ್ರಂಥಾಲಯದಲ್ಲಿ ಅತ್ಯಾಧುನಿಕವಾದ ಆಡಿಯೋ-ವಿಡಿಯೋ ವ್ಯವಸ್ಥೆ ಇದ್ದು, ಅದರ ಮೂಲಕ ಕನ್ನಡದ ಭಾವಗೀತೆಗಳು, ಸಿನೆಮಾಗಳು, ಸಾಕ್ಷ್ಯಚಿತ್ರಗಳು ಎಲ್ಲರಿಗೂ ಒದಗಿಬರಬೇಕು. ಪುಸ್ತಗಳ ಡಿಜಿಟಲ್ ಪ್ರತಿಗಳು ದೊರೆಯುವಂತಿದ್ದರೆ ಎಲ್ಲರಿಗೂ ಅನುಕೂಲ. ಹೀಗೆ ನಾವು ನಡೆಯಬೇಕಾದ ಹಾದಿ ದೂರ, ಆದರೆ ನಾವು ಅದನ್ನು ಒಂದಲ್ಲಒಂದು ದಿನ ತಲುಪುತ್ತೇವೆ ಎಂಬುದು ಖಂಡಿತ.

ಸಂಘಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪುಸ್ತಕ ನೀಡಿದ ದಾನಿಗಳು

೧. ನವ ಕರ್ನಾಟಕ ಪಬ್ಲಿಕೇಶನ್ಸ್, ಬೆಂಗಳೂರು

೨. ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು

೩. ಕರ್ನಾಟಕ ಲಲಿತ ಕಲಾ ಅಕಾಡೆಮಿ

೪. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು

೫. ಸಂಸದ್ ಗ್ರಂಥಾಲಯ, ನವದೆಹಲಿ

೬. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಉಡುಪಿ

೭. ಶ್ರೀ ಪಾಟೀಲ ಪುಟ್ಟಪ್ಪ ಅವರು, ಹುಬ್ಬಳ್ಳಿ

೮. ಶ್ರೀ ಎಚ್.ವೈ. ಶಾರದಾಪ್ರಸಾದ್, ನವದೆಹಲಿ

೯. ಡಾ. ಹಂ.ಪ. ನಾಗರಾಜಯ್ಯ, ಬೆಂಗಳೂರು

೧೦. ಡಾ. ಪುರುಷೋತ್ತಮ ಬಿಳಿಮಲೆ, ನವದೆಹಲಿ

೧೧. ಶ್ರೀ ಮೂಡಬಿದಿರೆ ಬಾಲಕೃಷ್ಣ ರಾವ್ ಮತ್ತು ಮಾಲತಿ ರಾವ್

೧೨. ಶ್ರೀ ಹೆಬ್ರಿ ಚಂದ್ರಕಾಂತ ಮಲ್ಯ, ನವದೆಹಲಿ

೧೩. ಶ್ರೀ ಪೂರ್ವಗಾಮೆ ಅನಂತ ರಾಮಯ್ಯ ನರಸಿಂಹಮೂರ್ತಿ

೧೪. ಶ್ರೀ ಐ. ರಾಮಮೋಹನ ರಾವ್, ನವದೆಹಲಿ

೧೫. ಶ್ರೀ ಎಂ.ಕೆ. ಧರ್ಮರಾಜ್, ನವದೆಹಲಿ

೧೬. ಶ್ರೀ ಕೆ.ಎಸ್. ಸಚ್ಚಿದಾನಂದ ಮೂರ್ತಿ, ನವದೆಹಲಿ

೧೭. ಶ್ರೀ ಅಗ್ರಹಾರ ಕೃಷ್ಣಮೂರ್ತಿ

 
     
 
 
 
     
   
 
DKS e- Abhimata
 
 
 
DKS - Committee
 
 
 
Send us a Message